ಕರ್ವಾಲೊನಲ್ಲಿ ಹಾರುವ ಓತಿಯೇ ಏಕೆ ಇದೆ?
ನನ್ನ ಸ್ನೇಹಿತನೊಂದಿಗೆ ಹೀಗೆ ಹರಟೆ ಹೋಡಿಯಬೇಕಾದರೆ, ನಾನು ಒಂದು ವರ್ಷದ ಹಿಂದೆ ಮುನ್ನಾರಿನ ಏರಿವಕುಳಂ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿನೀಡಿದ ಬಗ್ಗೆ ಹಾಗೂ ಅಲ್ಲಿನ ವಿಶೇಷತೆಯಾದ ನೀಲ್ಗಿರಿ ತಾರ್[1] ಎಂಬ ಒಂದು ಕುರಿಯ ಕುಟುಂಬಕ್ಕೆ ಸೇರಿದ ಪ್ರಾಣಿಯ ಬಗ್ಗೆ ಮಾತು ತಿರುವಿತು.
ಈ ನೀಲ್ಗಿರಿ ತಾರ್ ಪ್ರಾಣಿಯು ನಮ್ಮ ಪಶ್ಚಿಮ ಘಟ್ಟಗಳಿಗೆ, ಅದರಲ್ಲಿಯೂ ತಮಿಳು ನಾಡು, ಕೇರಳ ಹಾಗೂ ಕರ್ನಾಟಕದ ನೀಲ್ಗಿರಿ ಉಪಶ್ರೇಣಿಗಳಿಗೆ ಮೂಲ ನಿವಾಸಿಗಳು. ಇಂಗ್ಲಿಷ್ನಲ್ಲಿ ಇದಕ್ಕೆ Endemic ಅಂತಾರೆ. ಅಂದರೆ ಜಗತ್ತಿನಲ್ಲಿ ಇನ್ನೆಲ್ಲೂ ಇವು ಕಾಣಲು ಅಸಾಧ್ಯ. ಈ ರೀತಿಯ ಪ್ರಾಣಿಗಳಿಗೆ ಜೀವಶಾಸ್ತ್ರದಲ್ಲಿ ಹಾಗೂ ಜೀವಶಾಸ್ತ್ರಜ್ಞರಲ್ಲಿ ವಿಶೇಷವಾದ ಸ್ಥಾನವಿದೆ. ನಮ್ಮ ಪಶ್ಚಿಮ ಘಟ್ಟದಲ್ಲೇ ಶೇಕಡ 60% ಕಿಂತ ಹೆಚ್ಚು ಕಂಡುಬರುವ ಪ್ರಾಣಿಗಳ ಪ್ರಜಾತಿ (Species) ಈ ರೀತಿಯ endemic ಪ್ರಜಾತಿಗಳು.[2][3][4] ಇದು ನಮ್ಮ ಪಶ್ಶಿಮ ಘಟ್ಟದ ಕಾಡುಗಳ ವಿಶೇಷತೆ, ಶ್ರೇಷ್ಠತೆ, ಆನ್ಯುನತೆಯನ್ನು ವರ್ಣಿಸಲು ಕೇವಲ ಇನ್ನೊಂದು ಅಂಕಿಯಂಶವಷ್ಟೇ.
ಹೀಗೆ ಮಾತು ಬೆಳೆದಾಗ, ಹೇಗೋ ತೇಜಸ್ವಿಯವರು ಬರೆದಿರುವ ಕರ್ವಾಲೊ ಕಾದಂಬರಿಯ ಕಡೆ ಮಾತು ಬೆಳೆಯಿತು. ಈ ಕಾದಂಬರಿ "ಹಾರುವ ಓತಿ" ಎಂಬ ಪ್ರಾಣಿಯ ಹುಡುಕಾಟದ ಸುತ್ತ ಕಟ್ಟಿರುವ ಕಥೆ. ಈ ಹಾರುವ ಓತಿ ಅಥವಾ Indian Flying Lizard (ವೈಜ್ಞಾನಿಕ ಹೆಸರು - Draco dussumieri) ಕೂಡ ನಮ್ಮ ಪಶ್ಶಿಮ ಘಟ್ಟಗಳಿಗೆ endemic.[5]
ಈ ರೀತಿ ಯಾವುದೋ ಚಿಕ್ಕ ಪ್ರಾಣಿಯ ಹುಡುಕಾಟದ ಬಗ್ಗೆ ಬರೆದಿರುವ ಕಾದಂಬರಿ ಎಂದು ನನ್ನ ಸ್ನೇಹಿತನಿಗೆ ಹೇಳುತ್ತಿದಾಗ, ಅವನು ಈ ಪ್ರಾಣಿಯ ಬಗ್ಗೆ ಒಂದು Google Search ಮಾಡಿದ. ಅದರ ಪ್ರಕಾರ ಈ ಹಾರುವ ಓತಿ ಯಾವುದೋ ಮೂಲೆಯಲ್ಲಿ, ದಟ್ಟ ಅರಣ್ಯದ ಮಧ್ಯದಲ್ಲಿ ಮಾತ್ರ ಕಂಡುಬರುವ ಪ್ರಾಣಿಯೇನಲ್ಲ. ಅಥವಾ ಹುಲಿ, ಚಿಂಪಾಂಜಿಯಂತೆ ವಿನಾಶದ ಅಂಚಿನಲ್ಲಿರುವ ಜೀವಿಯೂ ಅಲ್ಲ. ಅಡಿಕೆ, ತಾಳೆ ತೋಟಗಳಲ್ಲಿಯೂ ಇವು ಕಾಣಿಸುತ್ತವೆ. ಮತ್ತೆ ಹೇಗೆ ಇಂಥ ಸುಲಭವಾಗಿ ಕಂಡುಬರುವ ಪ್ರಾಣಿಯನ್ನು ಹುಡುಕುವ ಬಗ್ಗೆ ಒಂದು ಪೂರ್ತಿ ಕಂಡಂಬರಿಯೇ ಇದೆ ಎಂದು ಅವನ ಪ್ರಶ್ನೆ.
ಆಗಲೇ ನನಗೆ ಈ ಪ್ರಶ್ನೆ ಮೂಡಿದ್ದು. ತೇಜಸ್ವಿಯವರು ಏನು ಪೆದ್ದರಲ್ಲ. ಜೀವಶಾಸ್ತ್ರದ ಬಗ್ಗೆ ಅಪಾರ ತಿಳುವಳಿಕೆ ಉಳ್ಳವರು. ಜೀವಶಾಸ್ತ್ರ, ಜೀವ ವಿಕಾಸವಾದ (Theory of Evolution), ನೈಸರ್ಗಿಕ ಆಯ್ಕೆ (Natural Selection) ಹಾಗೂ ಕಾಡು ಸುರಕ್ಷತೆ/ಸಂರಕ್ಷಣೆಯ ಬಗ್ಗೆ ಅವರು ಬರೆದಿರುವ ಕೃತಿಗಳೇ ಇದಕ್ಕೆ ಒಂದು ಸಣ್ಣ ಸಾಕ್ಷಿ.
ಹಾಗಿದ್ದರೆ ಎಲ್ಲರಿಗೂ ಸುಲಭವಾಗಿ ಕಂಡುಬರುವ ಪ್ರಾಣಿಯ ಹುಡುಕಾಟವನ್ನು ಆಧಾರವಾಗಿಟ್ಟುಕೊಂಡು ಕಾದಂಬರಿ ಯಾಕೆ ಬರೆದರು?
ನೀವು ಕಾರ್ವಾಲೋವನ್ನ ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಮನಸ್ಥಿತಿಯಲ್ಲಿ ಓದಬಹುದು.
ಹಾರುವ ಓತಿಯನ್ನು ನಿಜವಾಗಿಯೂ ಇಷ್ಟು ಸಾಹಸಪಟ್ಟು ನೋಡಬೇಕು, ಹಿಡಿಯಬೇಕೆಂದರೂ ಕಾದಂಬರಿಯ ಅನುಭವ ಏನು ಬದಲಾಗಲ್ಲ.
ಆದರೆ ಹಾರುವ ಓತಿಯ ಬಗ್ಗೆ ಗೊತ್ತಿದ್ದು ಓದಿದರೆ ಅಥವಾ ಓದಿದ ಮೇಲೆ ತಿಳಿದರೆ, ಕಥೆ, ಅದು ಕಟ್ಟಿರುವ ವಿಧಾನ, ಲೇಖಕರ ಉದ್ದೇಶ ಇವೆಲ್ಲವೂ ಒಂದು ಹೊಸ ತಿರುವು ಪಡೆದುಕೊಳ್ಳುತ್ತದೆ.
ಹಾರುವ ಓತಿ ಒಂದು ರೂಪಕ. ನಿಜವಾಗಿಯೂ ತೇಜಸ್ವಿಯವರು ಮಂದಣ್ಣ, ಕರಿಯಪ್ಪ, ಎಂಗ್ಟಾ, ಪ್ರಭಾಕರ, ಕರ್ವಾಲೊರೊಡನೆ ಸಾಹಸ ಮಾಡಿ ದಟ್ಟ ಅರಣ್ಯಕ್ಕೆ ಹೋಗಿ ಈ ಪ್ರಾಣಿಯನ್ನು ಕಂಡಿಲ್ಲ. ಬಹುಶಃ ಅವರು ತಮ್ಮ ತೋಟದಲ್ಲಿ ನಡೆದಾಡುತ್ತ ದಿನ ಕಂಡಿರಬಹುದು. ಆದರೆ ಒಂದು ದಿನ ತೇಜಸ್ವಿಯವರ ಕಣ್ಣಿಗೆ ಈ ಹಾರುವ ಓತಿ ಬೇರೆ ಎಂದೂ ಕಾಣದ ಪ್ರಸಂಗದಲ್ಲಿ ಕಾಣಿರಬಹುದು. ಹಾರುವ ಓತಿ - ಸರೀಸೃಪ (Reptiles) - ಮಹೋರಗ (Dinosaur) ಇದರ ಪೂರ್ವಜರು. ಹಕ್ಕಿಗಳು ಇದರ ದಾಯಾದಿಗಳು. ಒಂದು ಮರದಿಂದ ಇನ್ನೋದಕ್ಕೆ ಹಾರುವ ಮಾಯಾವಿ ಉಡ ಇದು.
ನಾನು ತೇಜಸ್ವಿಯವರ ಕೃತಿಗಳನ್ನು ಸೂಕ್ಷ್ಮವಾಗಿ ವಿಮರ್ಶೆ ಮಾಡುವಷ್ಟು ನುಪುಣನಲ್ಲ. ಈ ವಿಷಯದ ಬಗ್ಗೆ ಕೆಲವೊಂದು ಚರ್ಚೆ ಅಷ್ಟೇ. ಸಾಮಾಜಿಕವಾಗಿ (ವಿಜ್ಞಾನದೊಂದಿಗೆ) ಹಾಗೂ ವೈಜ್ಞಾನಿಕವಾಗಿ (ತತ್ವಶಾಸ್ತ್ರದೊಂದಿಗೆ) ಚರ್ಚೆ.
ಹಾರುವ ಓತಿ - ಕಾದಂಬರಿಯ ಪಾತ್ರಗಳಿಗೆ ಹೋಲಿಕೆ
ಹಾರುವ ಓತಿ ಒಂದು ಸರೀಸೃಪ ವರ್ಗ, ಉಡದ ಗಣಕ್ಕೆ ಸೇರಿದ್ದರು ಅದು ಹಾರಬಹುದು. ಹರೋದು ಅಂತೆಂದರೆ ತಪ್ಪಾಗುತ್ತೆ. ಇದು ಪಕ್ಷಿಯಂತೆ ರಕ್ಕೆ ಬಿಚ್ಚಿ ಹಾರಾವುದಿಲ್ಲ. ಮರದಿಂದ ಮರಕ್ಕೆ ಗಾಳಿಯಲ್ಲಿ ತೇಲಿಕೊಂಡು "ಹಾರುತ್ತದೆ".
ಹಾರಾಟ ಒಂದು ಪ್ರಕೃತಿಯ ಪವಾಡ. ಕೇವಲ ನಾಲ್ಕು ಬಾರಿಯಷ್ಟೇ ಈಡೀ ಭೂ ಮಂಡಲದ ಜೈವಿಕ ಇತಿಹಾಸದಲ್ಲಿ ಆಯ್ಕೆಗೊಂಡು ವಿಕಸನಗೊಂಡಿರುವ ಗುಣ. ಹಕ್ಕಿಗಳು, ಬಾವುಲಿ, ಹುಳಗಳು ಹಾಗೂ ಪ್ರಾಚೀನವಾದ ಹಾಗೂ ಈಗ ವಿನಾಶಗೊಂಡಿರುವ ಒಂದು ಸರೀಸೃಪ Pterosaurs. ಇವುಗಳಿಗಷ್ಟೆ ಹಾರುವ ಗುಣ ಇರುವುದು.[6][7]
ಜೀವ ವಿಕಾಸವಾದ ಓದಿದರೆ ಹಕ್ಕಿಗಳು ಹಾಗೂ ಸರೀಸೃಪಗಳ ಸಂಬಂಧದ ಬಗ್ಗೆ ಒಂದು ಅಂಶ ಕಾಣಬಹುದು. 65 ಮಿಲಿಯ ವರ್ಷದ ಹಿಂದಿನವರಿಗೂ ಭೂ ಮಂಡಲವನ್ನು ಮಹೋರಗಗಳು ಅಳುತಿದ್ದವು. ಅವುಗಳ ವಿನಾಶದ ಸಂದರ್ಭದಲ್ಲಿ ಕೇವಲ ಒಂದು ಬಗೆಯ ಮಹೋರಗ ಉಳಿದುಕೊಂಡವು. ಪುಕ್ಕಗಳಿರುವ ಮಹೋರಗಗಳು. ಅವೇ ಈಗಿನ ಹಕ್ಕಿಗಳು.
ಹಾಗೆಯೇ ಮಹೋರಗಗಳ ಪೂರ್ವಜರಿಂದನೆಯೇ ಈಗಿನ ಸರೀಸೃಪಗಳು, ಸುಮಾರು 100-200 ಮಿಲಿಯ ವರುಷಗಳ ಹಿಂದೆ, ಬೇರೆಯಾಗಿದ್ದವು. ಒಂದು ರೇತಿ ನೋಡಿದರೆ ಹಕ್ಕಿಗಳೂ ಸರೀಸೃಪಗಳೇ.[8] ಇದು ಯಾಕೆ ಇಲ್ಲಿ ತಂದದ್ದು? ನಮ್ಮ ಸಾಮಾನ್ಯ ಜ್ಞಾನದ ಪ್ರಕಾರ ಸರೀಸೃಪಗಳೆಂದರೆ ಮೊಸಳೆ, ಹಾವು, ಉಡ, ಹಲ್ಲಿ ಇತ್ಯಾದಿ. ಆದರೆ ಹಕ್ಕಿಗಳಿಗೂ, ಸರೀಸೃಪಗಳಿಗೂ ಇರುವ ಸಂಬಂಧ ಹೇಗೆ ತೋರಿಸುವುದು? ಒಂದು ಸರೀಸೃಪವೇ ಹಕ್ಕಿಯಂತೆ ಹಾರಿದರೆ?
ಸರೀನಪ್ಪಾ. ಹಾರುವ ಓತಿಗೂ - ಹಾರುವ ಹಕ್ಕಿಗೊ ಹೇಗೋ ಸಂಬಂಧ. ಅದಕ್ಕೂ ಕರ್ವಾಲೊಗೂ ಏನ್ ಸಂಬಂಧ ಈಗ?
ನನ್ನ ಪ್ರಕಾರ ಕರ್ವಾಲೋನಲ್ಲಿ ಮೂರು ರೀತಿಯ ಪಾತ್ರಗಳಿವೆ.
ಮೊದಲು ಕರ್ವಾಲೊ ಸಾಹೇಬರೇ. ವಿಜ್ಞಾನಿ, ವಿಜ್ಞಾನಿಕ ಸಿದ್ದಾಂತಗಳು, ವಾದಗಳನ್ನೇ ನಂಬುವವರು. ಕೇವಲ ನಂಬಿಕೆಯಲ್ಲ. ಅದೇ ಅವರ ಜೀವನ. ಸಿದ್ದಾಂತ, ಶಿಸ್ತು. ಅಧ್ಯಯನದಲ್ಲಿ ಪುಸ್ತಕದಲ್ಲಿ, ಇಲ್ಲವೆಂದರೆ ನಿಜವಲ್ಲ. ಪರಿಸರವನ್ನು ಪುಸ್ತಕದಿಂದ, ಸಿದ್ದಂತಗಳಿಂದ ಅರಿದವರು.
ಇನ್ನೂ ಮಂದಣ್ಣ, ಎಂಗ್ಟರಂತ ಪಾತ್ರಗಳು. ಪರಿಸರದ ಪಕ್ಕದಲ್ಲೇ, ಪರಿಸರದ ಜೊತೆಯಲ್ಲೇ ಹುಟ್ಟಿ ಬೆಳೆದವರು. ಮೂಡನಂಬಿಕೆಗಳಿಗೆ ಕಮ್ಮಿಯಿಲ್ಲ. ಅನುಭವಗಳನ್ನು ನಂಬಿ ಬದುಕುವವರು. ಮರ ಹತ್ತಬೇಕೆ? ಜೇನು ಬೇಕೇ? ಆಯ್ತು ಅಂತಾನೆ ಇಟ್ಕೊಳಿ. ಪರಿಸರವನ್ನು ಕಂಡು, ಬದುಕಿ ಅರಿದವರು.
ಮೂರನೇಯದು ತೇಜಸ್ವಿಯವರೇ. ಮೇಲ್ನೋಟದಲ್ಲಿ ಪೆದ್ದರಂತೆ ಅವರನ್ನು ಅವರು ಬರೆದುಕೊಂಡರು, ಆಳದಲ್ಲಿ ಅವರು ಇವೆರೆಡು ರೀತಿಯ ಪಾತ್ರಗಳ ನಡುವೆಯೆಲ್ಲೋ ಇರುವವರು. ವಿಜ್ಞಾನದ ಸಿದ್ದಾಂತಗಳನ್ನು ಅರಿತವರು ಆದರೆ ಕಾಡಿನಲ್ಲಿ ನಡೆಯಲು ಬಲ್ಲವರು. ಪುಸ್ತಕವನ್ನು ಓದಿ ತಿಳಿದವರೂ ಹೌದು. ಪರಿಸರದಲ್ಲಿ ತಲ್ಲೀನರಾಗಿ ಬೆರೆತು ಕಲಿತವರೂ ಹೌದು. ನಮ್ಮ ಹಾರುವ ಓತಿಯಂತೆ.
ಆಕಾಶದಲ್ಲಿ ಹರಡುವ ಹಕ್ಕಿಯೂ ಅಲ್ಲ. ನೆಲದ ಮೇಲೆ ಓಡಾಡುವ ಉಡವು ಅಲ್ಲ. ಎರಡರ ಗುಣವನ್ನು ಎಷ್ಟು ಬೇಕೋ ಅಷ್ಟು ಉಳ್ಳವರು. ಮರದಿಂದ ಮರಕ್ಕೆ ತೇಲುವವರು. ನಾವು ಕೂಡ ಹಾರುವ ಓತಿಯಂತಾಗಬೇಕು. ಕೇವಲ ಸಿದ್ದಾಂತಗಳು, ತತ್ವಗಳನ್ನು ಪುಸ್ತಕದಿಂದ ಅರಿತರೆ ಸಾಕೇ? ಕೇವಲ ಮರ ಹತ್ತಲು, ಜೇನು ಹಿಡಿಯಲು ಬಂದರೆ ಸಾಕೇ? ಜೀವನದಲ್ಲಿ ಸಮೋತೋಲನ ಕಂಡುಕೊಳ್ಳಬೇಕು. ತತ್ವ ಸಿದ್ದಂತವಿರಬೇಕು ಆದರೆ ಅನುಭವ, ಅಭ್ಯಾಸ ಮರೆಯಬಾರದು. ಇದಕ್ಕೆ ತಕ್ಕ ರೂಪಕ ಹಾರುವ ಓತಿ.
ಕಥೆಗೆ ತಕ್ಕ ನಾಯಕ
ವಿಕಾಸವಾದಕ್ಕೆ ವಾಪಸ್ ಬರೋಣ. ತೇಜಸ್ವಿಯವರು ಜೀವ ವಿಕಾಸವಾದವನ್ನು ತಮ್ಮ ಕಾದಂಬರಿಯಲ್ಲಿ ಎಷ್ಟೋ ಸುಂದರ ರೀತಿಗಳಲ್ಲಿ ವರ್ಣಿಸಿದ್ದಾರೆ. ಸೇನಾನಿಯವರು ಈ ವಿಡಿಯೋದಲ್ಲಿ ಅದನ್ನು ಪ್ರಸ್ತಾಪಿಸುತ್ತಾರೆ ನೋಡಿ. ನಾನು ಇನ್ನೊಮ್ಮೆ ಕರ್ವಾಲೊ ಕಾದಂಬರಿಯ ಕೊನೆಯ ಎರಡು ಭಾಗಗಳನ್ನು ಓದಿದೆ. ತೇಜಸ್ವಿಯವರ ಪಾತ್ರಕ್ಕೆ ಹಾರುವ ಓತಿ ಮೊದಲ ಬಾರಿ ಕಂಡಾಗ ಅವರು ಹೀಗೆ ವರ್ಣಿಸುತ್ತಾರೆ.
"ಬಂಡೆಯ ಬುಡದಲ್ಲಿ ಶಿಲುಬೆಗೇರಿದವನಂತೆ ಕುಳಿತಿದ್ದೆ. ಕೋಟ್ಯಂತರ ವರುಷಗಳಾಚೆ ಇಡೀ ಭೂ ಮಂಡಲದ ಆಳರಸರಾಗಿದ್ದ ಮಹೋರಗಗಳ ವಂಶದ ಆ ಪ್ರತಿನಿಧಿಯನ್ನು ನಾನು ಬಿಡುಗಣ್ಣಿನಿಂದ ನೋಡುತ್ತಿದೆ "
ಎಂದು ಬರೆಯುತ್ತಾರೆ.
ತೇಜಸ್ವಿಯವರು ಯಾವುದೋ ವಿನಾಶದ ಅಂಚಿನಲ್ಲಿರುವ (Critically Endangered) speciesನ್ನೆ ಆಯ್ಕೆ ಮಾಡಿಕೊಂಡಿದ್ದರೆ ಅದು ಸಾಮಾನ್ಯ ಓದುಗರಿಗೆ ಅಷ್ಟು ಪ್ರಭಾವವೇನು ಬೀರುತಿರಲಿಲ್ಲ. ಕಥೆ ಕೊಂಚ ದೂರದಲ್ಲೇ ಉಳಿದಿರುತ್ತಿರಬಹುದು. ಯಾವುದೋ ಹುಳನೋ, ಕಪ್ಪೇನೋ ಅಷ್ಟು ಆಕರ್ಷಕವಲ್ಲ. ಕಾಳಿಂಗ ಸರ್ಪ ಭಯಾನಕ. ಈ ಕಥೆಗೆ ಒಂದು ಆಕರ್ಷಕ, ವರ್ಚಸ್ವಿ ನಾಯಕ ಬೇಕಿತ್ತು. ಒಂದು ಉಡ ಹಾರುತ್ತೆಂದರೆ ಅದೆಂಥ ವಿಚಾರ! ವಿಕಾಸವಾದದ ಹಲವಾರು ಅಂಶಗಳನ್ನು ಚರ್ಚಿಸಲು ಹಾರುವ ಓತಿ ಮತ್ತು ಅದರ ಹುಡುಕಾಟ ತಕ್ಕ ಅಭ್ಯರ್ಥಿ.
ವಿಕಾಸವಾದವನ್ನು ಪ್ರದರ್ಶಿಸಲು ಉದಾಹರಣೆ
ಹಾರುವ ಓತಿ ಮರದ ಮೂಲ ನಿವಾಸಿ. ಮನುಷ್ಯರ ಪೂರ್ವಜರು ಕೂಡ ಮರದಲ್ಲಿದ್ದವರು. ಕರಿಯಪ್ಪ, ಕಾಣಿಸಿದ ಓತಿಯನ್ನು ಹಿಡಿಯಲು ಮರ ಹತ್ತಬೇಕಾದರೆ ಈ ಸಂಗತಿ ಬರುತ್ತದೆ.
"ಕರಿಯಪ್ಪ ಇದ್ದಕ್ಕಿದ್ದಂತೆ ನೂರಾರು ಮಿಲಿಯ ವರುಷ ಹಿಂದಕ್ಕೆ ಹೋಗಿ ತನ್ನ ಪೂರ್ವಜರ ಸ್ಥಿತಿಯನ್ನು ತಲುಪಲಿದ್ದಾನೆಂದೆನ್ನಿಸಿತು."
ಕೊನೆಗೂ ಕರಿಯಪ್ಪನ ಕೈಗೆ ಓತಿ ಸಿಕ್ಕಾಗ ಎಷ್ಟು ಸೊಗಸಾಗಿ
"ನಾವೆಲ್ಲ ಒಮ್ಮಲೆ ಸ್ತಬ್ಧರಾಗಿ ಹೋದೆವು. ಇದ್ದಕ್ಕಿದ್ದಂತೆ ಕಾಲಪ್ರವಾಹದ ಅದಮ್ಯ ಗತಿಯನ್ನು ಈಜಿ ಕರಿಯಪ್ಪ ಯುಗಾಂತರಗಳ ಹಿಂದಿನ ಕುಣಿಕೆಯೊಂದನ್ನು ಹಿಡಿದುಬಿಟ್ಟಿದ್ದ"
ಯುಗಯುಗಗಳ ಪ್ರಕೃತಿಯ ಆಟ-ಓಟಗಳ ಕ್ರಿಯೆಯನ್ನು ಕೈಯಲ್ಲಿ ಹಿಡಿದಹಾಗೆ.
ಹಾರುವ ಓತಿ ಯಾಕೆ ಹಾರಲು ಶುರು ಮಾಡಿತು? ಏಕೆ ಬೇಕಿತ್ತು ಈ ಕಲೆ ಅದಕ್ಕೆ.
ನೀವು ಜೀವ ವಿಕಾಸವಾದ ಓದಬೇಕಾದರೆ ಅಥವಾ ಅದರ ಬಗ್ಗೆ ಕೇಳಬೇಕಾದರೆ "ಮಂಗನಿಂದ ಮಾನವ" ಎಂಬ ವರ್ಣನೆ ಕೇಳಿರುತ್ತೀರಾ. ಚಿಂಪಾಂಜ಼ೆಗಳು ಮಾನವನಿಗೆ ಅತ್ಯಂತ ಹತ್ತಿರದ ಸಂಬಂಧಿಯಂದು ಓದಿರುತ್ತೀರಾ. ಬಹುಶಃ ಅವುಗಳು ಯಾವತ್ತೋ ನಮ್ಮಂತೆ ಆಗಬಹುದೇ? ಈ ಪ್ರಶ್ನೆ ಕೂಡ ಮೂಡಿರಬಹುದು.
ಹಾಗೆಯೇ ಜೇವ ವಿಕಾಸವಾದವನ್ನು ವಿವರಿಸುವಾಗ ಕೆಲವರು ಜಿರಾಫೆಯ ಉದಾಹರಣೆ ತೆಗೆದುಕೊಳ್ಳುತ್ತಾರೆ. ಪ್ರಕೃತಿಯ ಈ ಆಟಕ್ಕೆ ಅದು ಹೇಳಿ ಮಾಡಿಸಿದ ಉದಾಹರಣೆ. ಯಾಕೆ ಜಿರಾಫೆಯ ಕತ್ತು ಅಷ್ಟು ಉದ್ದವಿದೆ? ಇದಕ್ಕೆ ಕೆಲವರು
"ಕತ್ತೆ ರೂಪದ ಒಂದು ಪ್ರಾಣಿ ಮರದ ಎಲೆಗಳು ಎಟಕಿಸದೆ ತನ್ನ ಕತ್ತು ಎತ್ತುತ್ತಾ ಎತ್ತುತ್ತಾ ಹಾಗೆ ಹಲವಾರು ವರ್ಷಗಳನಂತರ ಅದು ಹಾಗೆ ಉದ್ದವಾಯಿತು" ಎನುತ್ತಾರೆ.
ಇದು ಸರಿಯಲ್ಲ. ಪ್ರಕೃತಿಯ ಮೇಲೆ ಒಂದು ಪ್ರಾಣಿಯ ಶ್ರಮ್ಮ ಅಷ್ಟು ಪ್ರಭಾವ ಬೀರಲ್ಲ. ಪ್ರಕೃತಿಯ ಜಾದೂ ಇದಕ್ಕಿಂತ ನಿಗೂಢ.
ವಿಜ್ಞಾನದ ಪ್ರಕಾರ ಜೀವರಾಶಿಗಳ ಸಂತಾನೋತ್ಪತ್ತಿಯ ಗುಣವೇ ಈ ಬದಲಾವಣೆಗಳಿಗೆ ಕಾರಣ. ಎಲ್ಲಾ ಹೊಸ ಜನ್ಮ ತಾಳಿದ ಜೀವಿಗಳಲ್ಲಿ ಸ್ವಲ್ಪ ಅಂಶ ತಾಯಿಯ ಗುಣ, ಇನ್ನೂ ಸ್ವಲ್ಪ ತಂದೆಯ ಗುಣವಿರುತ್ತದೆ. ಇದರಲ್ಲಿ ಪ್ರಕೃತಿಯಂಬ ಮಾಂತ್ರಿಕ ತನ್ನ ಒಂದಷ್ಟು ಗುಣಗಳನ್ನು ತನ್ನ ಮನಸ್ಸಿಗೆ ಅನ್ನಿಸಿದಂತೆ ತುಂಬುತ್ತಾಳೆ. ತಾಯಿಯಲ್ಲೂ ಇಲ್ಲ, ತಂದೆಯಲ್ಲೂ ಇಲ್ಲ. ಇದು random ಗುಣ. ನಮ್ಮ ಭೂ ಮಂಡಲದಲ್ಲಿ ಇರುವ ಜೇವಿಗಳ ವಿವಿಧತೆಗೆ ಈ randomness ಕಾರಣ.
ಜಿರಾಫೆಯ ಪೂರ್ವಜ ಪ್ರಾಣಿ ಕತ್ತೆಯಂತೆ ಇದ್ದದ್ದು ನಿಜ. ಆದರೆ ಅದು ಕತ್ತು ಎತ್ತಿ ಎತ್ತಿ ಹೀಗಾಗಲಿಲ್ಲ. ಯಾವುದೋ ಒಂದು ಕತ್ತೆ ಜನ್ಮ ನೀಡಿದಾಗ ಅದಕ್ಕೆ random ಆಗಿ ಕತ್ತು ಕೊಂಚ ಉದ್ದವಾಗುವ ಗುಣ ಬಂದಿತು. ಈ ಗುಣದಿಂದ ಈ ಕತ್ತೆಗೆ ಅನಕೂಲವಾಯಿತು. ಬೇರೆ ಕತ್ತೆಗಳಿಗಿಂತ ಹೆಚ್ಚು ಮೇವು ಸಿಕ್ಕಿತು. ಈಗ ಈ ಕತ್ತೆ ಮರಿ ಹಾಕಿದಾಗ ಇದರ ಕೊಂಚ ಉದದ್ದ ಕತ್ತು ಅದರ ಮರಿಗೂ ಹೋಯಿತು. ಕತ್ತು ಉದ್ದವಿಲ್ಲದ ಕತ್ತೆಗಳು ಹಾಗೆ ಸಾವಿರಾರ ವರ್ಷಗಳ ಬಳಿಕ ವಿನಾಶಗೊಂಡವು. ಇನ್ನೂ randomಆಗಿ ಕೆಲವು ಕತ್ತೆಗಳಿಗೆ ಕತ್ತು ಉದ್ದವಾಯಿತು. ಅವು ಉಳಿದು ಬೇರೆಯವು ವಿನಾಶಗೊಂಡವು. ಹೀಗೆ ಮಿಲಿಯ ವರ್ಷಗಳನಂತರ ಇವೆ ಜಿರಾಫೆಗಳಾದವು. ಇದನ್ನ ನೈಸರ್ಗಿಕ ಆಯ್ಕೆಯೆಂದೆನ್ನುತ್ತೇವೆ (Natural Selection) ಜೀವ ವಿಕಾಸವಾದದ ಮೊದಲ ಹಾಗೂ ಬಲು ಮುಖ್ಯವಾದ ನಿಯಮ ಹಾಗೂ ಸಿದ್ದಾಂತ. ಇದೆ ನಮ್ಮ ಸೃಷ್ಟಿಕರ್ತ. ಬ್ರಹ್ಮನಿಗಿಂತ ಶಕ್ತಿಶಾಲಿ. ಪ್ರಕೃತಿ ತನಗೆ ಬೇಕಾದ ಗುಣವನ್ನು ಆಯ್ಕೆ ಮಾಡಿಕೊಳ್ಳುತ್ತದೆ. [8][9][10]
ಈಗ ಹೇಳಿ. ಚಿಂಪಾಜ಼ೆ ನಮ್ಮಂತೆ ಆಗುತ್ತವ? ಇಲ್ಲ.
ಮಾನವನಿಗೂ ಚಿಂಪಾಜ಼ೆಗೂ ಹತ್ತಿರದ ಸಂಬಂಧವಷ್ಟೆ. ಮಿಲಿಯ ವರ್ಷಗಳ ಹಿಂದೆ ಯಾವುದೋ ಒಂದು ಮಂಗನಂತೆ ಇದ್ದ ಪ್ರಾಣಿಗೆ ಒಂದು random change/mutation ಆಗಿ ಒಂದು ಚಿಂಪಾಂಜ಼ೆ ರೂಪ ತಾಳಿತು, ಇನ್ನೊಂದು ಮನುಷ್ಯರ ರೂಪ ತಾಳಿತು. ಮನುಷ್ಯರ ರೂಪ ತಾಳಿದವರಿಗೆ ಮರದಿಂದ ಕೆಳಕ್ಕೆ ಇಳಿದರೆ ಅನಕೂಲವಾಯಿತು. ಚಿಂಪಾಂಜ಼ೆಗೆ ಮರದಲ್ಲೇ ಉಳಿದರೆ ಅನಕೂಲ.
ಮನುಷ್ಯರನ್ನಾಗಿ ಮಾಡಿದ ಪ್ರಕೃತಿಯ ಆಯ್ಕೆ ಏನು ಶ್ರೇಷ್ಠವಾದದ್ದಲ್ಲ. ನಾವು ಚಿಂಪಾಂಜ಼ೆಗಳಿಗಿಂತ ಮುಂದುವರೆದವರೇನಲ್ಲ ಅವುಗಳಿಂದ ವಿಭಿನ್ನ ಅಷ್ಟೇ. ನಾವು ಶ್ರೇಷ್ಠ, ವಿಶೇಷ ಪ್ರಾಣಿಗಳೆಂಬ ನಮ್ಮ ಬ್ರಹ್ಮೆಯನ್ನು ತ್ಯಜಿಸಬೇಕು. ಈ ಸಂಗತಿ ಕರ್ವಾಲೊದಲ್ಲಿ ತೇಜಸ್ವಿಯವರು ಕಾಲಕ್ಕೆ ಹೋಲಿಸಿ ಎಷ್ಟು ಸುಂದರವಾಗಿ ಬರೆದಿದ್ದಾರೆ.
"ತರಗೆಲೆಗಳ ಹಾಸಿಗೆ ಮೇಲೆ ಮಲಗಿ ಕಣ್ಣು ಮುಚ್ಚಿಕೊಂಡೆ. ಕರ್ವಾಲೊ ಗೋರಿಲ್ಲಾ ಚಿಂಪಾಂಜಿಗಳು ಮಾನವರಿಗಿಂತ ಕೊಂಚ ತಡವಾಗಿ ಭೂಮಿಗಿಳಿದವು ಎಂದು ಹೇಳಿದ್ದು ಜ್ಞಾಪಕಕ್ಕೆ ಬಂತು. ಯಾವುದು ತಡ? ಯಾವುದು ಮೊದಲು? ಕಾಲದೇಶದ ನಡುವಿನ ಸುಭದ್ರ ವಾಸ್ತವ ಒಂದಿದ್ದರೆ ಅವೆಲ್ಲಾ. ಯಾವ ಅಂತಿಮ ಉದ್ದೇಶವೂ ಇಲ್ಲದ ವಿಕಾಸದ ನಿರಂತರ ಘಟನಾವಳಿಗಳ ನಡುವೆ ಕ್ರಿಯೆಗೆ ಅರ್ಥ, ಉದ್ದೇಶ ಇಲ್ಲದೆ ಹೋದ ಸ್ಥಿತಿಯಲ್ಲಿ ಕಾಲವೆನ್ನುವುದು ಇರುವುದೇ?"
ಈ ಸಂಗತಿ ಹಾರುವ ಓತಿಗೆ ಹೋಲಿಸಿದಗಾ ನಮಗೆ ತಿಳಿಯುವುದು ಇದು. ಹಾರುವ ಓತಿ ಮರದಿಂದ ಮರಕ್ಕೆ ತೇಲುತ್ತದೆ ಅಷ್ಟೇ. ಹಕ್ಕಿಗಳಂತೆ ರೆಕ್ಕೆ ಬಡೆದು ಹಾರಲು ಆಗುವಿದಿಲ್ಲ. ಹಾಗಂತ ಅವು ಹಕ್ಕಿಗಳಿಗಿಂತ ಹಿಂದುಳಿದ ಪ್ರಾಣಿಗಳೇನಲ್ಲ. ತನಗೆ ಬೇಕಾದ ಗುಣ ಪ್ರಕೃತಿ ಆಯ್ಕೆ ಮಾಡಿಕೊಂಡಿದೆ. ಹಾರುವ ಓತಿ ಹಕ್ಕಿಯನ್ನು ನೋಡಿ "ಅಯ್ಯೋ ನನಗೂ ರೆಕ್ಕೆ ಇದ್ದಿದರೆ" ಎಂದು ಬೇಸರಪಡುವುದಿಲ್ಲ.
ಹಕ್ಕಿಗಳು ಒಂದು ರೀತಿ, ಈ ಓತಿಗಳು ಇವರದ್ದೇ ರೀತಿ.
ನಾವು ಕೂಡ ನಮ್ಮ ಗುಣಗಳನ್ನು ಅರಿತು ಅದನ್ನು ಬೇರೆಯವರಿಗೆ ಹೋಲಿಸದೆ ಹಾರುವ ಓತಿಯಂತೆ ಖುಷಿಯಾಗಿ, ನಮ್ಮ ಕೆಲಸವಾದರೆ ಸಾಕು, ಎಂದು ಮುಂದೂಡಬೇಕು. “ಅವರಿಗ್ಯರಿಗೊ ಇನ್ನೇನೋ ಗುಣ, ಕಲೆ ಇದೆ ನನಗ್ಯಕಿಲ್ಲ” ಎಂದು ಬೇಸರಪಟ್ಟು ಕೂತರೆ ಏನು ಉಪಯೋಗ? ಇದನ್ನ ತೇಜಸ್ವಿ ಹಾಗೂ ಕರ್ವಾಲೊರ ಸಂದರ್ಶನದಲ್ಲಿ ಕಾಣಬಹುದು.
ಹಾರುವ ಓತಿಯನ್ನು ಕುರಿತು ತೇಜಸ್ವಿಯವರ ಪಾತ್ರ
"ಹಾರೋ ಪ್ರಯತ್ನದಲ್ಲಿ ಅದು ತಪ್ಪುದಾರಿ ಹಿಡೀತು ಅಂತ ಕಾಣ್ತದೆ. ಕೈಗಳ ಬದಲು ಪಕ್ಕೆ ಉಪಯೋಗಿಸಿತು ಸಾರ್. ಅದಕ್ಕೆ ಅದು ಹಾಗೆ ಉಳೀತು. ಮಿಕ್ಕವು ರೆಕ್ಕೆ ಬೆಳೆಸಿಕೊಂಡು ಹಕ್ಕಿ ಆಗಿಬಿಟ್ಟವು"
ಎನ್ನುತ್ತಾರೆ. ಅದಕ್ಕೆ ಕರ್ವಾಲೊ
"ತಪ್ಪು ಸರಿ ಹೇಗೆ ಹೇಳ್ತೀರಿ. ನಮಗೆ ಈ ಕ್ಷಣ, ಇಲ್ಲಿ ಹೀಗನ್ನಿಸಿದೆ. ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ! "
ಎಂದು ಹೇಳಿ ತೇಜಸ್ವಿ ಪುಸ್ತಕ ಮುಗಿಸುತ್ತಾರೆ.
"ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ?" ಜೀವ ವಿಕಾಸಕ್ಕೆ ತಪ್ಪು-ಸರಿಯ ತತ್ವವೇ ಇಲ್ಲ. ನಾವು ಈ ಬೃಹದ್ದಾದ ಕ್ರಿಯೆಯ ಮುಂದೆ ಜುಜೂಬಿಗಳು ಅಷ್ಟೇ. ನಮಗೇನು ತಿಳಿಯುತ್ತೆ ಪ್ರಕೃತಿಯ ಅಗಾಧವಾದ ಯೋಜನೆ?
ಆಧಾರಗಳು:
World Heritage Nomination – IUCN Technical Evaluation by UNESCO, 2010, WESTERN GHATS (INDIA) – ID No. 1342 Rev
World Heritage Convention, UNESCO, 2012 Western Ghats <https://whc.unesco.org/en/list/1342/>
Shaon Pritam Baral, 2021, Life in Western ghats: Tourism and survival of its endemic species <https://conservationoptimism.org/life-in-western-ghats-tourism-and-survival-of-its-endemic-species/>
Hunter P. The nature of flight. The molecules and mechanics of flight in animals. EMBO Rep. 2007 Sep;8(9):811-3. doi: 10.1038/sj.embor.7401050. Erratum in: EMBO Rep. 2008 Jan;9(1):110. PMID: 17767190; PMCID: PMC1973956.
Craig Holdrege, 2003, The Giraffe’s Short Neck: Why Evolutionary Thought Needs a Holistic Foundation <https://www.natureinstitute.org/article/craig-holdrege/the-giraffes-short-neck>
Bill Nye, 1996, Bill Nye the Science Guy TV Show - S03E06 - Evolution, 6:35 to 8:35 <
>
Nye, B., & Powell, C. S. (2014). Undeniable: Evolution and the science of Creation. St. Martin’s Press.


